Wednesday, 21 September 2016

ಸಮೂಹ ಸನ್ನಿ ಬೇಕಿಲ್ಲ, ಸಮೂಹ ಪ್ರಜ್ಞೆ ಇಂದಿನ ಅತ್ಯಗತ್ಯತೆ

ನಮಗೇನಾಗಿದೆ ಇಂದು !? ನಾವು ಪ್ರತಿಯೊಬ್ಬರೂ ಹೀಗೇ ಏನೋ!!  'ಇಲಿ ಹೋಯಿತೆಂದರೆ ಹುಲಿ ಹೋಯಿತು' ಎನ್ನುವ ಜಾಯಮಾನ ನಮ್ಮ ಬಹುಪಾಲು ಜನರದ್ದು ಇಂದಾಗಿದೆ. ಸ್ವಲ್ಪವೇ ಅನೂಹ್ಯ ಘಟನೆಯೊಂದು ನಡೆದರೂ ಸರಿಯೇ, ಹೋ! ಹೋ! ಎಂದು ಬೊಬ್ಬೆ ಹೊಡೆದಂತೆ, ಏನೋ ವಿಸ್ಮಯವೆಂಬಂತೆ, ಬೆರಗೆಂಬಂತೆ ನಮ್ಮಲ್ಲನೇಕರ ನಡಾವಳಿ. ವಿಷಯಕ್ಕೇನು, ವಿಪುಲವಾಗಿದೆ ಇಂದಿನ ಪ್ರಜಾಪ್ರಭುತ್ವದಲ್ಲಿ - ಜಾತಿ, ಮತ, ಪಂಗಡ, ಆರ್ಥಿಕತೆ, ಶ್ರೀಮಂತಿಕೆ, ಜನಪ್ರಿಯತೆ, ತಂತ್ರಜ್ಞಾನ, ಫ್ಯಾಷನ್ನು, ಮಾಧ್ಯಮಗಳು, ಉಭಯ ದೇಶಗಳ ಸಂಬಂಧ (ಹಳಸಿದ!?), ಬಡತನ, ಆತ್ಮಹತ್ಯೆ, ಭಯೋತ್ಪಾದನೆ, ಅತ್ಯಾಚಾರ, ದೇವರು, ನೀರು, ನೆಲ, ಗಡಿ, ಸಂಬಂಧಗಳು, ಅಹಂಕಾರಗಳು, ಜಿದ್ದು-ಗುದ್ದು, ..... ಅಯ್ಯೋ, ಇನ್ನೆಷ್ಟು ಪಟ್ಟಿ ಮಾಡುವುದು, ಬಿಡಿ. ಈ ತರಹದ ಪ್ರತಿಯೊಂದೂ ಸ್ವಲ್ಪವೇ ವ್ಯತ್ಯಾಸಗೊಂಡರೂ, ಅಸಹಜವಾದರೂ, ಸಹಜವಾಗಿಯೇ ಇದ್ದರೂ ಸುಮ್ಮನೆ, ಸುಮ್ಮನೆ ಸುದ್ದಿ ಮಾಡುತ್ತದೆ. ಸುದ್ದಿ ಮಾಡುವ ಜೊತೆ ಜೊತೆಗೆ ಸಾಮೂಹಿಕ ಸನ್ನಿಗೆ ತಿರುಗುತ್ತದೆ. ಅಂದರೆ ಎಲ್ಲರ ಬಾಯಲ್ಲೂ ಅದೇ ವಿಷಯ, ಮಾತು, ಪ್ರತಿಮಾತು, ವಾದ, ವಿವಾದ, ಜಗಳ, ಕದನ, ಕಚ್ಚಾಟ, ವ್ಯಾಜ್ಯ, ವಸಾಹತು. ಆದರೆ, ಇಂತಹುದೇ ಮತ್ತೊಂದು ವಿಚಾರ  ಎದ್ದುಬಂದ ಕೂಡಲೇ, ಈ ಹಿಂದಿನ ವಿಷಯ-ವಿಚಾರ  ಎಲ್ಲರಲ್ಲೂ ಮರೆತೇ ಹೋಯಿತೋ ಎಂಬಂತೆ ಮಾಯವಾಗಿ ಎದ್ದುಬಂದ ಹೊಸ ವಿಚಾರ ಗೂಡು ಮಾಡಿಬಿಡುತ್ತದೆ. ಯಾರೋ ತಿಳಿದವರು ಹೇಳಿದಂತೆ, 'ಜನರ ಜ್ಞಾಪಕಶಕ್ತಿ ಅತ್ಯಲ್ಪ ಕಾಲದ್ದು' ಎಂದು. 

ಮತ್ತೊಬ್ಬರು ಹೇಳಿದ್ದಾರೆ, 'ಸಮೂಹಕ್ಕೆ ತಲೆಯುಂಟು, ಮೆದುಳಿಲ್ಲ'  ಎಂದು.  ನನ್ನ  ಈ ಬರಹವನ್ನು ಓದುತ್ತಿರುವವರಿಗೆ ಅನ್ನಿಸುತ್ತಿರಬಹುದು, ಇದೇನಿದು, ಬರೀ ಹಳೇ ಗಾದೆ ಮಾತುಗಳನ್ನು ಹೇಳಿ ನಮ್ಮನ್ನು ಸನ್ನಿಗೆ ನೂಕುತ್ತಿರುವರು ಇವರಾರಪ್ಪ,  ಎಂದು. ಗಾದೆ ಮಾತು ವೇದಕ್ಕೆ ಸಮಾನವಾದರೂ, ಅನುಭವದ ಮಾತು ಇನ್ನೂ ಹೆಚ್ಚು ಬೆಲೆಯುಳ್ಳದ್ದು. 

ಸಮೂಹ ಮಾಧ್ಯಮವು ಇಂತಹ ಸಮೂಹ ಸನ್ನಿಗೆ ಕಾರಣವೋ, ಅಥವಾ ಜನರು ಈ ಸನ್ನಿಯನ್ನು ಸೃಷ್ಟಿಸುತ್ತಿದ್ದಾರೋ, ವ್ಯಾಪಾರಿಗಳು ತಮ್ಮ ಜಾಹಿರಾತುಗಳನ್ನು ಜನರ ಬಾಯಿಯಿಂದ ಬರಿಸಿ ಬೇಳೆಕಾಳು ಬೇಯಿಸಿಕೊಳ್ಳುತ್ತಿದ್ದಾರೋ, ರಾಜಕಾರಣಿಗಳು ಈ ಸನ್ನಿ ಇದ್ದಷ್ಟೂ ತಮಗೆ ಲಾಭ  ಎಂದು ಖುಷಿಪಡುತ್ತಿದ್ದಾರೋ, ಒಟ್ಟಿನಲ್ಲಿ ಈ ಸನ್ನಿ ದಿನನಿತ್ಯದ ಬದುಕನ್ನು ದುರ್ಭರವಾಗಿಸುತ್ತಿದೆಯೇ ಹೊರತು, ಸುಭಿಕ್ಷವಾಗಿಸುತ್ತಿಲ್ಲ  ಎಂಬುದಂತೂ ಸತ್ಯ. 

ಸಿನೆಮಾ ವಲಯದ 'ಸನ್ನಿ'ಗಿಂತಲೂ ಈ ಸನ್ನಿ ಅಪಾಯಕಾರಿ ಎಂದು ಬಲ್ಲವರು ನಂಬುತ್ತಾರೆ. ಇದೀಗ, ತನ್ನದೇ ಸಿನೆಮಾವೊಂದು ಭಾರತದಲ್ಲಿ ಬಿಡುಗಡೆ ಆಗದಿದ್ದರೆ ಒಳಿತು ಎನ್ನುತ್ತಿರುವ ಸನ್ನಿಗೆ ಇಂತಹ  ಅನೇಕ ಸನ್ನಿಗಳು ನಮ್ಮನ್ನು ದೈನಂದಿನ ಕಾಡುತ್ತಿವೆ ಎಂಬುದು ತಿಳಿಯದೇನೋ!

No comments:

Post a Comment